ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಹೋರಾಟ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವಲಯ ಆಯುಕ್ತರ ಕಚೇರಿ ಮುಂದೆ ಏಪ್ರಿಲ್ 28 ರಿಂದ ಮೂರು ದಿನಗಳ ಕಾಲ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಹಾಲು, ವಿದ್ಯುತ್ ಹಾಗೂ ಆಸ್ತಿ ತೆರಿಗೆ, ಪಾರ್ಕಿಂಗ್ ಶುಲ್ಕದ ಬಗ್ಗೆ ಹೋರಾಟ ಮಾಡಲಾಗುವುದು. ಬೆಂಗಳೂರಿನ ಜನರ ಮೇಲೆ ಕಾಂಗ್ರೆಸ್ ಭರಪೂರ ತೆರಿಗೆಗಳನ್ನು ಹೇರಿದೆ. ಪ್ರತಿ ಮನೆಗಳಿಗೆ ಹೋಗಿ ಕರಪತ್ರ ಹಂಚಿ ಜನರಲ್ಲಿ ಜಾಗೃತಿ ಮೂಡುಸಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ಚುನಾವಣೆಯನ್ನು ಸರ್ಕಾರ ಮುಂದೂಡುತ್ತಿದೆ. ಈ ಬಗ್ಗೆಯೂ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ನಮ್ಮ ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಸ್ಪೀಕರ್ ಜೊತೆ ಚರ್ಚಿಸಲಾಗಿದೆ. ಈ ಅಮಾನತು ಆ ಒಂದು ಅಧಿವೇಶನಕ್ಕೆ ಮಾತ್ರ ಸೀಮಿತವಾಗಬೇಕು. ಅದನ್ನು ಬಿಟ್ಟು ಹೊರಗೆ ಭತ್ಯೆ ಕೊಡುವುದಿಲ್ಲ ಎನ್ನುವುದು ಸರಿಯಲ್ಲ ಇದು ಅಸಂವಿಧಾನಿಕವಾದ ಕ್ರಮ ಎಂದು ಅಶೋಕ ಅಸಮಾಧಾನ ವ್ಯಕ್ತಪಡಿಸಿದರು.
ಗ್ರೇಟರ್ ಬೆಂಗಳೂರು ವಿಧೇಯಕದ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ರಾಜ್ಯಪಾಲರು ಸಹಿ ಹಾಕಿದರೆ ಅದು ಕಾಂಗ್ರೆಸ್ ಪರ ಎನ್ನುತ್ತಾರೆ, ಸಹಿ ಹಾಕದೇ ಇದ್ದರೆ ಅದು ಬಿಜೆಪಿ ಕಚೇರಿ ಎಂದು ಟೀಕಿಸುತ್ತಾರೆ ಎಂದು ಕಾಂಗ್ರೆಸಿಗರಿಗೆ ಟಾಂಗ್ ನೀಡಿದರು.
ಕೆಎಎಸ್ ಪರೀಕ್ಷೆಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದೆ. ಅಧಿವೇಶನದಲ್ಲಿ ನಾನು ಈ ವಿಷಯ ಪ್ರಸ್ತಾಪಿಸಿದಾಗ ತೀರ್ಪು ಬಂದ ಮೇಲೆ ಮರು ಪರೀಕ್ಷೆ ಬಗ್ಗೆ ಮುಕ್ತ ಮನಸ್ಸಿನಿಂದ ಪರಿಶೀಲನೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದರು. ಈಗ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಗಮನಿಸಿ ನಂತರ ಮುಂದೆ ಹೋರಾಟದ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ದೇಶದ ಯೋಧರ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ, ಮತ್ತೆ ಇವರಿಗೆ ಯಾರ ಮೇಲೆ ನಂಬಿಕೆ ಇದೆ? ಇಡೀ ದೇಶ ಒಂದಾಗಿ ಭಯೋತ್ಪಾದಕ ದಾಳಿಯನ್ನು ಖಂಡಿಸಬೇಕು. ಉಗ್ರರು ಹಿಂದೂ ಎಂದು ಹೇಳಿಯೇ ಹುಡುಕಿ ಕೊಂದಿದ್ದಾರೆ. ಬೇಹುಗಾರಿಕೆ ಸರಿಯಿಲ್ಲ, ಯೋಧರು ಸರಿಯಿಲ್ಲ ಎಂದು ಟೀಕೆ ಮಾಡುವುದು ಸರಿಯಿಲ್ಲ ಎಂದು ಪ್ರತಿಪಕ್ಷ ನಾಯಕ ಹೇಳಿದರು.
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸೆಲ್‌ಗಳನ್ನು ಮಟ್ಟ ಹಾಕಬೇಕಿದೆ. ಅವರಿಗೆ ನೆರವು ಕೊಡುವುದು, ಬೇಲ್ ಕೊಡಿಸುವುದು, ಕಾನೂನು ಸಹಾಯ ಮಾಡುವುದು ನಡೆಯುತ್ತಿದೆ. ಇಂತಹವರನ್ನು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ ಅದರಂತೆಯೇ ಆಗಲಿದೆ ಎಂದು ತಿಳಿಸಿದರು.